ಮ್ಯಾಟ್ಜಿನಿ, ಜೂಸೆಪ್ಪ -
1805-72. ಇಟಲಿಯ ರಾಜಕೀಯ ಚಿಂತನಕಾರ, ದೇಶಪ್ರೇಮಿ, ರಾಷ್ಟ್ರೀಯತಾವಾದಿ, ಲೇಖಕ ಮತ್ತು ಕ್ರಾಂತಿಕಾರಿ. ಇವನ ತಂದೆ ಲೈಗೂರಿನನ್ ಕಣರಾಜ್ಯದ ಉನ್ನತಾಧಿಕಾರಿ ಹಾಗೂ ವೃತ್ತಿಯಲ್ಲಿ ವೈದ್ಯ. ಹುಟ್ಟಿದ್ದು ಜಿನೋವದಲ್ಲಿ. ತಾಯಿ ದೇಶಾಭಿಮಾನಿ ಹಾಗೂ ಸ್ವಾತಂತ್ರ್ಯಪ್ರಿಯೆ. ಇವನಿಗೆ ಲ್ಯಾಟಿನ್ ಭಾಷೆ ಕಲಿಸಿದ ಗುರುಗಳು ಕೂಡ ರಾಷ್ಟ್ರೀಯತಾವಾದಿ ಹಾಗೂ ಸ್ವಾತಂತ್ರ್ಯಪ್ರೇಮಿ. ಹೀಗಾಗಿ ಈತನಲ್ಲಿ ದೇಶಪ್ರೇಮ ಹಾಗೂ ರಾಷ್ಟ್ರೀಯತೆ ರಕ್ತಗತವಾಗಿತ್ತು. ಬಹುಸೂಕ್ಷ್ಮ ಹಾಗೂ ಆಕರ್ಷಣೀಯ ವ್ಯಕ್ತಿಯಾಗಿದ್ದ. ಬಾಲ್ಯದಿಂದಲೇ ಅನೇಕ ಪುಸ್ತಕಗಳ ಅಧ್ಯಯನಮಾಡಿ ವಿಷಯ ಸಂಗ್ರಹಿಸುವುದು ಈತನ ಹವ್ಯಾಸವಾಗಿತ್ತು. ತನ್ನ 21ನೆಯ ವಯಸ್ಸಿನಲ್ಲಿ (1826) ಜಿನೋವ ವಿಶ್ವವಿದ್ಯಾಲಯದಲ್ಲಿ ನ್ಯಾಯಶಾಸ್ತ್ರ ಪದವೀಧರನಾದ. ಉತ್ತಮ ವಕೀಲನಾಗುವುದು ಇವನ ಇಚ್ಛೆಯಾಗಿತ್ತು. ಸಾಹಿತ್ಯಾಭಿಮಾನಿಯಾದ ಈತ ಅನೇಕ ಪ್ರಬಂಧಗಳನ್ನೂ ಫ್ರೌಢ ಲೇಖನಗಳನ್ನೂ ಬರೆದ. ಇವನು ಬರೆದ ಪ್ರತಿಯೊಂದು ಲೇಖನವೂ ಇಟಲಿಯ ಜನತೆಯಲ್ಲಿ ದೇಶಭಕ್ತಿ, ರಾಷ್ಟ್ರಪ್ರೇಮ ಮತ್ತು ಐಕ್ಯ ಮನೋಭಾವವನ್ನು ಮೂಡಿಸುವಂಥವು. ಡಾಂಟೆಯನ್ನು ಕುರಿತಂತೆ ಈತ ಬರೆದ ವಿಮರ್ಶಾತ್ಮಕ ಗ್ರಂಥ ಯುರೋಪಿನ ಅನೇಕ ರಾಷ್ಟ್ರಗಳಲ್ಲಿ ಪುರಸ್ಕರಿಸಲ್ಪಟ್ಟತು. ಇದಲ್ಲದೆ ಆನ್ ದಿ ಡ್ಯೂಟಿಸ್ ಆಫ್ ಮ್ಯಾನ್ ಎಂಬ ಪ್ರಸಿದ್ಧ ಗ್ರಂಥವನ್ನು ಕೂಡ ಮ್ಯಾಟಿನಿ ಮನೋಭಾವವನ್ನು ಕೆರಳಿಸುತ್ತಿದ್ದವು.

18ನೆಯ ಶತಮಾನದ ಅಂತ್ಯದ ತನಕ ಇಟಲಿ ಛಿದ್ರಛಿದ್ರವಾಗಿ ವಿವಿಧ ಆಳ್ವಿಕೆಗೆ ಒಳಪಟ್ಟಿದ್ದಿತ್ತಲ್ಲದೇ ಅದೊಂದು ಭೌಗೋಳಿಕ ಹೆಸರಾಗಿ ಉಳಿದಿತ್ತೇ ವಿನಾ ಏಕರಾಷ್ಟ್ರವಾಗಿರಲಿಲ್ಲ. ಇಂಥ ಸಂದರ್ಭದಲ್ಲಿ ಜನತೆಯ ಮನದಲ್ಲಿ ಸ್ಥೈರ್ಯ, ಧೈರ್ಯ ಮತ್ತು ಸ್ಫೂರ್ತಿಯನ್ನು ತುಂಬಿದವರು ಇಟಲಿಯ ಮೂವರು ಸುಪುತ್ರರು-ಮ್ಯಾಟಿನಿ, ರಾರೀಬಾಲ್ಡಿ ಮತ್ತು ಕವೂರ್.

ಮ್ಯಾಟ್ಜಿನಿ ಜನತೆಯಲ್ಲಿ ರಾಷ್ಟ್ರೀಯ ಮನೋಭಾವವನ್ನು ಹುರಿದುಂಬಿಸಲು ಹಾಗೂ ಸ್ವಾತಂತ್ರ್ಯಕ್ಕೋಸ್ಕರ ಹೋರಾಟ ನಡೆಸಲು ಸ್ಥಾಪಿಸಲಾಗಿದ್ದ ಕಾರ್ಬೊನಾರಿ ಸಂಘ ಸೇರಿದ. ಈ ಸಂಘಕ್ಕೆ ತನ್ನದೇ ಆದ ಸಂಕೇತ, ನಿಯಮ, ಮತ್ತು ನಿಬಂಧನೆಗಳಿದ್ದುವು. ಪರಸ್ಪರ ಸಹಾಯ, ಹೊರರಾಷ್ಟ್ರಗಳ ಪರಾಧೀನತೆಯನ್ನು ತಪ್ಪಿಸಿ ರಾಷ್ಟ್ರದ ಸ್ವಾತಂತ್ರ್ಯವನ್ನು ಸಾಧಿಸುವುದು ಇದರ ಗುರಿಯಾಗಿತ್ತು. ಸಂಘದ ಸದಸ್ಯನಾದರೂ ಅದರೊಳಗಿರಲು ಮನಸ್ಸಾಗಲಿಲ್ಲ. ಇಷ್ಟರಲ್ಲಿ ಕ್ರಾಂತಿಕಾರನೆಂಬ ಆಧಾರರಹಿತ ಆರೋಪದ ಮೇಲೆ ಸರ್ಕಾರ ಇವನನ್ನು ಸವೋನದಲ್ಲಿ 6 ತಿಂಗಳು ಕಾರಾಗೃಹದಲ್ಲಿರಿಸಿತು. ಕಾರಾಗೃಹದಲ್ಲಿದ್ದಾಗ ಈತ ತಾನು ನಿರ್ವಹಿಸಬೇಕಾದ ಕಾರ್ಯ, ಸಾಧಿಸಲಿರುವ ಗುರಿ, ಸ್ವಾತಂತ್ರ್ಯ ಮತ್ತು ಏಕೀಕರಣದ ಬಗ್ಗೆ ಕೈಗೊಳ್ಳಬೇಕಾದ ಇತರ ಸಾಧನೋಪಾಯಗಳನ್ನು ಕುರಿತಂತೆ ಆಲೋಚಿಸಿದ. ಸೂಕ್ತ ರುಜುವಾತಿಲ್ಲದ ಕಾರಣ ಮ್ಯಾಟ್ಜಿನಿಯನ್ನು ಬಂಧನದಿಂದ ಬಿಡುಗಡೆ ಮಾಡಲಾಯಿತು. ಮ್ಯಾಡ್ಜಿನಿ ಕ್ರಾಂತಿಕಾರರ ನಾಯಕನಾಗಿದ್ದಂತೆ ರಾಜಕೀಯ ಮತ್ತು ನೈತಿಕ ಧರ್ಮೋಪದೇಶಕನೂ ಆದ. ಧರ್ಮಪ್ರಸಾರ ಕಾರ್ಯಕೈಗೊಳ್ಳಬೇಕೆಂಬ ಉದ್ದೇಶದಿಂದಲೇ ಯಂಗ್‍ಇಟಲಿ ಎಂಬ ಸಂಸ್ಥೆ ಸ್ಥಾಪಿಸಿದ. ಇದೊಂದು ಗುಪ್ತ ಕ್ರಾಂತಿಕಾರಕ ದಳವಾಗಿ ಕಾರ್ಯನಿರ್ವಹಿಸುತ್ತಿತ್ತು. ಶ್ರದ್ಧೆಯಿಂದ ಕೆಲಸಮಾಡಬಲ್ಲ ಬಡ ಯುವಕರು ಇದರ ಸಂಸ್ಥಾಪಕ ಸದಸ್ಯರು. ಶ್ರದ್ಧಾಸಕ್ತಿಯಿಂದ ದುಡಿಯುತ್ತಿದ್ದ ಈ ಸಂಘದ ಪ್ರಭಾವ ದೇಶದಲ್ಲೆಲ್ಲ ಹರಡಿತು.
ರಾಜಕೀಯ ಚಿಂತನಕಾರನಾಗಿದ್ದ ಮ್ಯಾಟ್ಜಿನಿ ಸಂಯುಕ್ತಾತ್ಮಕ ಸರ್ಕಾರದ ದುಂದು ವೆಚ್ಚ, ಭ್ರಷ್ಟಾಚಾರ ಹಾಗೂ ರಾಜಕೀಯ ವೈಮನಸ್ಯವನ್ನು ಚೆನ್ನಾಗಿ ಅರಿತವನಾಗಿದ್ದ. ಆದ್ದರಿಂದಲೇ ಈತ ಪ್ರಜಾಪ್ರತಿನಿಧಿಗಳನ್ನೊಳಗೊಂಡ ಏಕಾತ್ಮಕ ಸರ್ಕಾರದ ರಚನೆಯನ್ನು ಪ್ರೋತ್ಸಾಹಿಸುತ್ತಿದ್ದ. ರಾಜತ್ವಕ್ಕೆ ಮನ್ನಣೆ ಕೊಡದಿದ್ದ ಈತ ದೇವರು ಮತ್ತು ದೊರೆ ಎನ್ನುವುದರ ಬದಲು ದೇವರು ಮತ್ತು ಜನ ಎಂದು ಹೇಳಬೇಕೆಂದು ತನ್ನ ಲೇಖನದಲ್ಲಿ ಪ್ರತಿಪಾದಿಸಿದ. ಇವನ ಪ್ರಕಾರ ಜನ ಎಂದರೆ ಜಾತಿ ಕುಲಬೇಧಗಳಿಗೆ ಅವಕಾಶವಿಲ್ಲದವರು ಎಂದರ್ಥ. ಜನತೆಯೇ ರಾಜ್ಯದ ಪ್ರಭುಗಳು, ಪ್ರಜಾಭಿಪ್ರಾಯದಂತೆ ವರ್ತಿಸುವುದೇ ಪ್ರತಿನಿಧಿಗಳ ಕೆಲಸ, ಪ್ರಜಾಧಿಪತ್ಯದಿಂದ ಕೂಡಿದ ಗಣರಾಜ್ಯ ಅತ್ಯುತ್ತಮ ಸರ್ಕಾರ ಪದ್ಧತಿ ಎಂಬುದು ಇವನ ವಾದ. ಸಂಯುಕ್ತಾತ್ಮಕ ಸರ್ಕಾರದಲ್ಲಿ ಏಕತೆಯನ್ನು ಸಾಧಿಸುವುದು ಅಸಾಧ್ಯ. ಒಂದು ದೇಶ ನಿಜವಾದ ರಾಷ್ಟ್ರವಾಗಬೇಕಾದರೆ ಅದು ಏಕಾತ್ಮಕ ಸರ್ಕಾರ ವ್ಯವಸ್ಥೆಯನ್ನು ಹೊಂದಿರಬೇಕೆಂಬುದು ಇವನ ಅನಿಸಿಕೆ.

ಸ್ವಾತಂತ್ಯ, ಸಮಾನತೆ ಮತ್ತು ಭ್ರಾತೃಭಾವನೆಗಳನ್ನು ಸಮಾಜದ ಪ್ರತಿಯೊಬ್ಬನಲ್ಲೂ ಜಾಗೃತಗೊಳಿಸುವ ಸಲುವಾಗಿ ಯಂಗ್ ಯುರೋಪ್ ಎಂಬ ಸಂಸ್ಥೆ ಇವನ ಪ್ರಭಾವದಿಂದ ಹುಟ್ಟಿತು. ಇದರ ಧ್ಯೇಯಧೋರಣೆಗಳನ್ನು ಸಾರಲು ಈತ ಇಂಗ್ಲೆಂಡಿಗೆ ತೆರಳಿದ. ಇಂಗ್ಲೀಷ್ ಬರದ ಮ್ಯಾಟ್ಜಿನಿ ಇಂಗ್ಲೆಂಡಿನಲ್ಲಿ ಕಷ್ಟಪಟ್ಟು ಇಂಗ್ಲಿಷ್ ಕಲಿತು ವೃತ್ತಪತ್ರಿಕೆಗಳಿಗೆ ಅನೇಕ ಲೇಖನಗಳನ್ನು ಬರೆದು ಅದರಿಂದ ಬಂದ ಹಣದಿಂದ ಜೀವನ ಸಾಗಿಸತೊಡಗಿದ. ಈ ಮಧ್ಯೆ ದೇಶದ ಇತರ ಭಾಗಗಳ ಕ್ರಾಂತಿಕಾರರೊಂದಿಗೆ ಗುಪ್ತವಾಗಿ ಪತ್ರವ್ಯವಹಾರ ನಡೆಸಿ ನಿಕಟ ಸಂಪರ್ಕವಿರಿಸಿಕೊಂಡಿದ್ದ. ಪ್ಯಾರಿಸ್, ಮಿಲಾನ್ ಮುಂತಾದ ಕಡೆ ಕ್ರಾಂತಿ ಪ್ರಾರಂಭವಾಯಿತು. ಸಿಸಿಲೆ, ಪಿಡ್‍ಮಾಂಟ್ ಮತ್ತ ನೇಪಲ್ಸ್ ಹೊಸ ಸಂವಿಧಾನವನ್ನು ಪಡೆದವು. ಇದರ ಪರಿಣಾಮವಾಗಿ ಪ್ರಪ್ರಥಮವಾಗಿ ಮ್ಯಾಟ್ಜಿನಿ ರಾಜಕೀಯ ರಂಗವನ್ನು ಪ್ರವೇಶಿಸಿದ.

ಆಸ್ಟ್ರಿಯಕ್ಕೂ ಇಟಲಿಗೂ ಯುದ್ಧ ನಡೆದು ಇಟಲಿ ಸೋಲನ್ನೊಪ್ಪಬೇಕಾಯಿತು. ಪೋಪ್ ಇಟಲಿಯನ್ನು ಬಿಟ್ಟು ಓಡಿಹೋದ ಕಾರಣದಿಂದಾಗಿ ಅಲ್ಲಿ ಗಣರಾಜ್ಯ ಸ್ಥಾಪನೆಯಾಯಿತು. (1849).

ಕ್ರಾಂತಿಕಾರಕ ಹಾಗೂ ಸ್ವಾತಂತ್ರ್ಯದ ಭಾವನೆಯನ್ನು ಮ್ಯಾಟ್ಜಿನಿ ಜನರಲ್ಲಿ ಹರಡುತ್ತಿರುವಾಗಲೇ ರಾಜನೀತಿ ನಿಪುಣ ಕವೂರನ ಪ್ರಭಾವದಿಂದ ಹಾಗೂ ಇನ್ನೂ ಅನೇಕ ಐತಿಹಾಸಿಕ ಘಟನೆಗಳ ಪರಿಣಾಮದಿಂದ ಇಟಲಿಯ ಏಕೀಕರಣವಾಯಿತು. (ನೋಡಿ- ಇಟಲಿಯ-ಇತಿಹಾಸ) ಇಟಲಿ ಸ್ವತಂತ್ರ ರಾಷ್ಟ್ರವಾಯಿತಲ್ಲದೆ ರಾಜನ ಅಧಿಕಾರ ಮತ್ತಷ್ಟು ಪ್ರಬಲವಾಯಿತು. ರಾಜತ್ವಕ್ಕೆ ಎಂದೂ ಮನ್ನಣೆ ನೀಡದ ಈತನನ್ನು ಮೆಸ್ಸಿನದ ಪ್ರಜೆಗಳು ಪಾರ್ಲಿಮೆಂಟಿಗೆ ಚುನಾಯಿಸಿದರೂ ಅದನ್ನು ನಿರಾಕರಿಸಿದ (1865). ಗಾರೀಬಾಲ್ಡಿಯೊಂದಿಗೆ ಕ್ರಾಂತಿಯನ್ನು ಭಾಗವಹಿಸಿದನೆಂಬ ಅಪಾದನೆಯಿಂದಾಗಿ ಸ್ವಿಟ್ಜರ್ಲೆಂಡಿನಿಂದ ಮ್ಯಾಟ್ಜಿನಿಯನ್ನು ಗಡಿಪಾರು ಮಾಡಬೇಕೆಂದು ಇಟಲಿ ಸರ್ಕಾರ ಮನವಿ ಮಾಡಿಕೊಂಡಿತು (1869). ಜೀವನದಲ್ಲಿ ಬಹಳವಾಗಿ ಜಿಗುಪ್ಸೆಗೊಂಡು ಸಿಸಿಲಿ ಕಡೆಗೆ ತಲೆಮರೆಸಿಕೊಂಡು ಹೋಗುತಿದ್ದ ಮ್ಯಾಟ್ಜಿನಿಯನ್ನು ಅಧಿಕಾರಿಗಳು ಬಂಧನದಲ್ಲಿಟ್ಟರು. (1870) ರಾಜನಿಗೆ ಪುತ್ರ ಸಂತಾನವಾದ ಸಂದರ್ಭದಲ್ಲಿ ಇವನ ವಿಮೋಚನೆಯಾಯಿತು. ಕಾರ್ಮಿಕರ ಸಂಸ್ಥೆಯನ್ನು ಸ್ಥಾಪಿಸಬೇಕೆಂಬ ಇವನ ಆಕಾಂಕ್ಷೆ, ಕಾರ್ಲ್‍ಮಾಕ್ರ್ಸ್ ಮತ್ತು ಬಕೋನಿನ್ ಇವರೊಡನೆ ಸಹಕರಿಸಬೇಕೆಂದಿದ್ದ ಇವನ ಇಚ್ಛೆ ಕೊನೆಗೂ ಈಡೇರಲಿಲ್ಲ. ಜೀವನದಲ್ಲಿ ನಿರಾಶನಾಗಿದ್ದ ಮ್ಯಾಟ್ಜಿನಿ, 1872 ಮಾರ್ಚ್ 10 ರಂದು ಅಸುನೀಗಿದ. 
							 (ಆರ್.ಪಿ.ಆರ್.ಎ)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ